Abbha olle lekhana madam

Sameera samee <[email protected]> wrote:

>ಈ ದಿನ ಖ್ಯಾತ ಸಾಹಿತಿ ದೇವನೂರು ಮಹದೇವ ಅವರ ಜನುಮ ದಿನ.
>
>ಅವರಿಗೆ ಜನುಮ ದಿನದ ಶುಭಾಷಯಗಳನ್ನು ತಿಳಿಸುತ್ತಾ, ಅಂತರ್ಜಾಲದಲ್ಲಿ ದೊರೆತ ಅವರ ಕುರಿತ ಒಂದು 
>ಲೇಖನ....
>
>ದೇವನೂರ ಮಹಾದೇವ
>
>
>ದೇವನೂರ ಮಹಾದೇವ ಅವರು ಹುಟ್ಟಿದ್ದು ಜೂನ್ 10, 1948ರಂದು.  ಹಾಗೆಂದು ಅವರ ಬಳಿ ಹೋಗಿ ‘ಹ್ಯಾಪಿ 
>ಬರ್ತ್ ಡೇ ಸಾರ್’ ಅಂತ ಹೇಳಿದರೆ, ‘ಇವನ್ಯಾವನಯ್ಯಾ ಮಿಕ’ ಎಂದು ಗಂಭೀರರಾಗಿಬಿಡುತ್ತಾರೇನೋ 
>ಅನಿಸುತ್ತದೆ.  ಅವರು ಮನುಷ್ಯನ ಮೂಲ ಆಳವನ್ನು ತಲುಪದ ಯಾವ ಆಚರಣೆಗಳನ್ನೂ ಒಪ್ಪುವವರಲ್ಲವೇನೋ 
>ಎಂದೆನಿಸುತ್ತಿದೆ.
>
>
>ದೂರದರ್ಶನ ಬಂದ ಪ್ರಾರಂಭದ ದಿನಗಳಲ್ಲಿ ಇರಾನ್, ಇರಾಕ್ ದೇಶಗಳ ಯುದ್ಧಗಳು ಕ್ರಿಕೆಟ್ ಆಟ ನೇರ 
>ಪ್ರಸಾರವಾಗುವಂತೆ ವಾರ್ತೆಗಳಲ್ಲಿ ಪ್ರಸಾರವಾಗುತ್ತಿದ್ದವು.  ಯುದ್ಧದಲ್ಲಿನ ಕ್ಷಿಪಣಿ 
>ಪ್ರಯೋಗಗಳು, ಬಾಂಬ್ ಹೇಗೆ ಬೀಳುತ್ತಿವೆ ಎಂದು ಕುತೂಹಲದಿಂದ ಅಲ್ಲಿನ ರಸ್ತೆಗಳಲ್ಲಿ 
>ನೋಡುತ್ತಿದ್ದ ಮಕ್ಕಳು, ಇಂಧನ ಸೋರಿಕೆಯಿಂದ ಕಪ್ಪುಗಟ್ಟಿದ ಸಮುದ್ರ, ಆ ಸಮುದ್ರದ ದಡದಲ್ಲಿ 
>ಬದುಕಲೂ ಆಗದೆ, ಸಾಯಲು ಆಗದೆ ನಲುಗುತ್ತಿದ್ದ ಒಂದು ಪಕ್ಷಿ ಇವೆಲ್ಲಾ ನನ್ನ ಮನಸ್ಸಿನಲ್ಲಿ 
>ಮರೆಯಾಗದೆ ನಿಂತಿವೆ.  ಅದೇ ದಿನಗಳಲ್ಲಿ ನಮ್ಮ ದೇವನೂರು ಮಹಾದೇವರ ಒಂದು ಸಂದರ್ಶನ ಕೂಡಾ 
>ದೂರದರ್ಶನದಲ್ಲಿ ಪ್ರಸಾರವಾಗಿತ್ತು.  ಅವರನ್ನು ಕೇಳಿದ ಪ್ರಶ್ನೆ, “ಇಂದಿನ ಬದುಕಿನಲ್ಲಿ 
>ತಮ್ಮನ್ನು ಕಾಡುತ್ತಿರುವ ಪ್ರಶ್ನೆ ಯಾವುದು?”.  ದೇವನೂರು ಮಹಾದೇವ ಅವರು ಹೇಳಿದ್ದು, “ಗಲ್ಫ್ 
>ಯುದ್ಧದಲ್ಲಿ ತನ್ನ ಬದುಕನ್ನು ಕಳೆದು ಕೊಂಡು ಒದ್ದಾಡುತ್ತಿದೆಯಲ್ಲಾ ಆ ಪಕ್ಷಿ.... ಅದು 
>ನನ್ನನ್ನು ತುಂಬಾ ಕಾಡುತ್ತಿದೆ!”
>
>
>ದೇವನೂರ ಮಹಾದೇವ ಎಂದರೆ ತಕ್ಷಣ ನೆನಪಿಗೆ ಬರುವುದು ಅವರ ಒಡಲಾಳ, ಕುಸುಮಬಾಲೆ, ಅಮಾಸ, ಗ್ರಸ್ತ, 
>ಡಾಂಬರು ಬಂದುದು, ಮೂಡಲ ಸೀಮೆಯ ಕೊಲೆಗಿಲೆ, ಮಾರಿಕೊಂಡವರು  ಹೀಗೆ ಹಲವು ಕಥೆಗಳು.  ನಮ್ಮ 
>ದೇಶದಲ್ಲಿ ನಾವು ಜನರನ್ನು  ಪ್ರಾಂತ್ಯ, ಭಾಷೆ, ಜಾತಿ, ಉಪಜಾತಿ, ಮರಿ ಜಾತಿ ಹೀಗೆ ಯಾವ 
>ರೀತಿಯಲ್ಲಿ ಛಿದ್ರ ಛಿದ್ರವಾಗಿ ಒಡೆದುಹಾಕಿದ್ದೇವೆಯೋ ನಮ್ಮ ಬುದ್ಧಿವಂತ ಜನಾಂಗ ಸಾಹಿತ್ಯವನ್ನೂ 
>ಕೂಡ ನವ್ಯ, ದಲಿತ, ಬಂಡಾಯ, ಮರಿ ಬಂಡಾಯ ಹೀಗೆ ಒಡೆದು ಹಾಕಿಬಿಟ್ಟಿದೆಯೇನೋ ಅಂತನಿಸುತ್ತದೆ.  
>ನಾನು ಸಾಹಿತ್ಯದ ಬಗ್ಗೆ ಅಷ್ಟೊಂದು ಬಲ್ಲವನಲ್ಲವಾದದ್ದರಿಂದ ಆ ಬಗ್ಗೆ ಹೇಳಿದರೆ ಇವನೊಬ್ಬ ಶುದ್ಧ 
>ಶುಂಠ, ಅವೈಜ್ಞಾನಿಕ ಎಂದು ಹಲವು ಮಹನೀಯರು ಪ್ರತಿಭಾನ್ವಿತ ವಿಶ್ಲೇಷಣೆಗೆ ಬರುವ ಸರ್ವ 
>ಸಾಧ್ಯತೆಗಳಿವೆ!  ಅದು ಏನೇ ಇರಲಿ, ಇಂತಹ ವಾದ ವಿವಾದಗಳು ನಮ್ಮನ್ನು ಮಾನವನ ಆಳದಲ್ಲಿ ಇಳಿಯುವ 
>ಶ್ರೇಷ್ಠ ಅನುಭಾವದಿಂದ ದೂರ ಮಾಡುತ್ತಿವೆಯೇನೋ ಎಂಬುದು ನನ್ನಲ್ಲಿರುವ ವ್ಯಥೆ.  ದೇವನೂರ ಮಹಾದೇವ 
>ಅಂತಹ ಅಂತರಾಳಕ್ಕಿಳಿಯುವ ಸಮರ್ಥ ಬರಹಗಾರನನ್ನು ಯಾವುದೋ ದಲಿತ - ಬಂಡಾಯ ಎಂದು ಪ್ರತ್ಯೇಕಿಸ 
>ಹೊರಟಾಗ ಇಡೀ ಮಾನವ ಸಂಕುಲಕ್ಕೆ ಅಗತ್ಯವಾಗಿರುವ ಅವರ ಬರಹಗಳಲ್ಲಿನ ತೀವ್ರವಾದ ಸ್ಪಂದನೆಗಳ ಲಾಭ 
>ಸರಿಯಾಗಿ ಆಗುವುದಿಲ್ಲ.  ಅವರ ಬರಹಗಳ ಆಳವನ್ನು ವರ್ಗರಹಿತವಾಗಿ ಪ್ರತಿಯೊಬ್ಬರೂ ತಲುಪಿ ಮಾನವನ 
>ಮೂಲಸ್ಪಂದನೆಗಳನ್ನು ಅರ್ಥೈಸಿ ಅದರಲ್ಲೊಂದಾಗುವ ಅವಶ್ಯಕತೆ ತುಂಬಾ ಇದೆ.
>
>
>ಒಮ್ಮೆ ಅವರು ಮಾನಸ ಗಂಗೋತ್ರಿಯಲ್ಲಿ ಮಾಡಿದ ಭಾಷಣದ ತುಣುಕುಗಳು ಹೀಗಿವೆ   ‘ನಾನು ಬರೆಯುತ್ತಾ 
>ಬರೆಯುತ್ತಾ ಬರೆಯುವ ಪ್ರಕ್ರಿಯೆಯಲ್ಲಿ ನನ್ನನ್ನು ನಾನು ಕಳೆದುಕೊಂಡು ಬೇರೆಯವನಾಗಬೇಕು. ಹಾಗೆ 
>ಬೇರೆಯಾದವನು ಯಾರೂ ಆಗಬಹುದು ಆ ಮೂಲಕ ಎಲ್ಲರಂತೂ ಆಗಬಹುದು. ಹೀಗಾದಾಗ ನನ್ನನ್ನು ನಾನು 
>ಕಳೆದುಕೊಳ್ಳಲು ಸಾಧ್ಯ. ನಾನು ಮಹಾದೇವ ಎನ್ನುವುದನ್ನೂ ಬಿಟ್ಟು ಬಿಡಬೇಕು. ನನ್ನ ಜಾತಿಯನ್ನು 
>ಮರೆಯಬೇಕು. ನನ್ನ ಭಾಷೆಯನ್ನು ಮರೆಯಬೇಕು. ಆ ಬರೆಯುವ ಕ್ರಿಯೆಯಲ್ಲಿ ಈ ಎಲ್ಲವುಗಳನ್ನೂ 
>ಮೀರಬೇಕು. ಸಭೆಯ ಮಧ್ಯದ ಸಭಿಕನಾಗದಿದ್ದರೆ ಹೇಗೆ ಮಾತನಾಡಲು ಸಾಧ್ಯವಿಲ್ಲವೋ ಹಾಗೆ ಬರೆಯುವ 
>ಕ್ರಿಯೆ ಕೂಡ. ಅಂದರೆ ಬಿಕಮಿಂಗ್ ಅದರ್ ಬೀಯಿಂಗ್ ಎಂದಾಯಿತು.  ಬರೆಯುವ ಕ್ರಿಯೆಯಲ್ಲಿ ಕೆಲವು 
>ಬಾರಿ ‘ಆತ್ಮ'ವಾಗಿ ಬರಬಹುದು. ಕೆಲವು ಬಾರಿ ‘ದೇಹ'ವಾಗಿ ಬರಬಹುದು. ಒಟ್ಟಿನಲ್ಲಿ ನೋಡಿದರೆ 
>ನೋವು, ಕಷ್ಟ, ಸಂಕಟ, ದುಃಖ, ಖುಷಿ ಎಲ್ಲವೂ ಒಂದೇ. ಅದು ಒಂದು ಜೀವದಿಂದ ಮತ್ತೊಂದು ಜೀವಕ್ಕೆ 
>ಹೋಗುವಂತೆ ಅಥವಾ ತನ್ನೊಳಗೆ ಜಗತ್ತನ್ನು ಭಾವಿಸುವ, ಜಗತ್ತಿನೊಳಗೆ ತನ್ನನ್ನು 
>ಭಾವಿಸಿಕೊಳ್ಳುವಂತಹ ಪ್ರಕ್ರಿಯೆ. ಹಿಂದೆ ಹೇಳಿದೆನಲ್ಲಾ ರೂಢಿ ಎಂದು ಹಾಗೆ. ಅಂದರೆ ನಾನು 
>ಮುಸ್ಲಿಂ, ದಲಿತ, ಬ್ರಾಹ್ಮಣ, ಮಹಾದೇವ ಎಂಬಲ್ಲಿಗೇ ನಿಂತರೇ ಸಾಯುವವರೆಗೂ ಆ ಸ್ಥಿತಿಯಲ್ಲೇ 
>ನಿಂತು ಬಿಡುತ್ತೇನೆ (ಅರವತ್ತು ವರ್ಷದವನಾದರೂ ಪ್ರೈಮರಿ ಶಾಲೆಯೇ ಫೇಲಾಗಿರುವ ಹುಡುಗನ 
>ಮನಸ್ಥಿತಿಯಲ್ಲಿಯೇ ಉಳಿದಂತೆ ಕಾಣುತ್ತಾನೆ).  ಗಿರೀಶ ಕಾರ್ನಾಡ್ ಒಮ್ಮೆ ಹೇಳುತ್ತಿದ್ದರು - 
>ಪಂಜಾಬ್‌ನಲ್ಲಿ ಗಲಭೆ ಆಗಿ ಆಗಿ ಹೆಣ ರಸ್ತೇಲಿ ಬಿದ್ದಿದ್ದರೂ ಮಕ್ಕಳು ಅದನ್ನೂ ನೋಡಿ ಸುಮ್ಮನೆ 
>ಹೋಗುತ್ತಿರುತ್ತಾರೆ - ಅಂದರೆ ಅವರು ಅದಕ್ಕೆಲ್ಲ ಅಡ್ಜೆಸ್ ಆಗಿ ಹೋಗಿರುತ್ತಾರೆ. ಸಾವಿನ ಬಗೆಗಿನ 
>ಸೂಕ್ಷ್ಮತೆ ಕೂಡ ಕಳೆದುಕೊಂಡು ಬಿಟ್ಟಿದ್ದಾರೆ. ಹೀಗೆ ಸೂಕ್ಷ್ಮತೆಯನ್ನು ಕಳೆದುಕೊಂಡರೆ ಅದು 
>ಸೃಜನಶೀಲವಾಗುವುದಿಲ್ಲ”.  ದೇವನೂರು ಮಹಾದೇವ ಅವರು ಸೂಕ್ಷ್ಮಜ್ಞತೆಯಲ್ಲಿ ನಮ್ಮನ್ನು ಇಳಿಸುವ 
>ವಿಶಿಷ್ಟ ಬರಹಗಾರ.  ವೆಬ್ ಅಂತರ್ಜಾಲದಲ್ಲಿರುವ ಅವರ ಹಲವು ಲೇಖನಗಳಾದ ಅಂಬೇಡ್ಕರ್, ಗಾಂಧೀ 
>ಮತ್ತು ಹಲವು ವರ್ಗಸಂಹಿತೆಗಳ ವಿರೋಧಗಳು ಇವೆಲ್ಲಾ ವೈಯಕ್ತಿಕತೆಗೆ ಮೀರಿದ ಆಳದಲ್ಲಿ ಮನಸ್ಸು 
>ಈಜುತ್ತಿರುವ, ಏನನ್ನೋ ಗಾಢವಾದದ್ದನ್ನು ಅರಸುತ್ತಿರುವ ಅನುಭಾವವನ್ನು ಕೊಡುತ್ತವೆ.
>
>
>ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರು ಗ್ರಾಮದಲ್ಲಿ ಜನಿಸಿದ ಮಹಾದೇವರು ತಮ್ಮ 
>ಶಿಕ್ಷಣ-ವಿದ್ಯಾಭ್ಯಾಸವನ್ನು ದೇವನೂರು, ನಂಜನಗೂಡು, ಮೈಸೂರುಗಳಲ್ಲಿ ಪಡೆದು ಮೈಸೂರು 
>ವಿಶ್ವವಿದ್ಯಾಲಯದ ಕನ್ನಡ ಎಂ.ಎ ಪದವಿ ಪಡೆದರು.  1975-1989ರ ಅವಧಿಯಲ್ಲಿ ಮೈಸೂರಿನ ಸೆಂಟ್ರಲ್ 
>ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಲ್ಯಾಂಗ್ವೇಜಸ್ ನಲ್ಲಿ ಉದ್ಯೋಗನಿರತರಾಗಿದ್ದ ಇವರು ನಂತರದ 
>ವರ್ಷಗಳಲ್ಲಿ ಪೂರ್ಣಾವಧಿಯ ಕೃಷಿಕರಾಗಿದ್ದಾರೆ.  ದ್ಯಾವನೂರು ಸಂಕಲನದ ಕತೆಗಳನ್ನು ಗಮನಿಸಿದರೆ 
>ನವ್ಯ ಸಾಹಿತ್ಯ ಚಳುವಳಿಯ ಪರಿಚಯ ಪ್ರೇರಣೆ ಒಂದು ಹಂತದಲ್ಲಿ ಇವರಿಗೆ ಗಾಢವಾಗಿತ್ತೆಂದು ತಿಳಿದು 
>ಬರುತ್ತದೆ.  ಇದರ ಜೊತೆಗೆ ಅರವತ್ತು – ಎಪ್ಪತ್ತರ ದಶಕಗಳಲ್ಲಿ ಕ್ರಿಯಾಶೀಲವಾಗಿದ್ದ ಲೋಹಿಯಾವಾದಿ 
>ಸಮಾಜವಾದಿ ಯುವಜನ ಸಭಾದ ಚಿಂತನ ಚಟುವಟಿಕೆಗಳು, ಮೈಸೂರಿನಲ್ಲಿ ವಾಸವಾಗಿದ್ದ ಯು. ಆರ್. 
>ಅನಂತಮೂರ್ತಿ, ಶ್ರೀ ಕೃಷ್ಣ ಆಲನಹಳ್ಳಿ ಇಂತಹ ಲೇಖಕರೊಡನೆ ಇದ್ದ ಒಡನಾಟ, ಇವೆಲ್ಲವೂ ಮಹಾದೇವರಿಗೆ 
>ಲೇಖಕ ವ್ಯಕ್ತಿತ್ವವನ್ನು ಹುಡುಕಿಕೊಳ್ಳಲು ನೆರವಾಗಿರಬಹುದು.  ವಿದ್ಯಾರ್ಥಿ ದೆಸೆಯಲ್ಲಿಯೇ ಇವರು 
>‘ನರ’ ಎಂಬ ಪ್ರತಿಭಟನಾ ಪತ್ರಿಕೆಯ ಸಂಪಾದಕ-ಪ್ರಕಾಶಕರಾಗಿದ್ದರು.  1975ರಲ್ಲಿ ಲೋಕನಾಯಕ 
>ಜಯಪ್ರಕಾಶ ನಾರಾಯಣರು ಮೈಸೂರಿಗೆ ಬಂದಿದ್ದಾಗ, ಸಾರ್ವಜನಿಕ ಸಭೆಯೊಂದರ ಅಧ್ಯಕ್ಷರಾಗಿದ್ದುದು ಆ 
>ಕಾಲದ ಇವರ ಆಸಕ್ತಿಯ ಹರವುಗಳನ್ನು ಸೂಚಿಸುತ್ತದೆ.  
>
>
>ದೇವನೂರ ಮಹಾದೇವ ಅವರ ಸಾಧನೆಗಳನ್ನು ಕನ್ನಡ ಸಾಂಸ್ಕೃತಿಕ ಲೋಕ ಮನಸಾರೆ ಒಪ್ಪಿ ಗೌರವಿಸಿದೆ.  
>1984ರಲ್ಲಿ ಕಲ್ಕತ್ತಾದ ಭಾರತೀಯ ಪರಿಷತ್ ಇವರ ‘ಒಡಲಾಳ’ ವನ್ನು ಉತ್ತಮ ಸೃಜನಶೀಲ ಕೃತಿಯೆಂದು 
>ಗೌರವಿಸಿದೆ.  ಅದೇ ವರ್ಷ ಇವರಿಗೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ದೊರೆಯಿತು.  
>1989ರಲ್ಲಿ ಅಮೆರಿಕಾದಲ್ಲಿ ನಡೆದ “ಇಂಟರ್ನ್ಯಾಷನಲ್ ರೈಟಿಂಗ್ ಪ್ರೋಗ್ರಾಂ”ನಲ್ಲಿ ಮಹಾದೇವ 
>ಭಾಗವಹಿಸಿದರು.  1991ರಲ್ಲಿ ಕುಸುಮ ಬಾಲೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು.  
>ನಲವತ್ತೊಂದರ ಕಿರಿವಯಸ್ಸಿನಲ್ಲೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕಾರ ಪಡೆದ 
>ಭಾರತೀಯ ಲೇಖಕರಲ್ಲಿ ಮಹಾದೇವ ಅವರೇ ಮೊದಲನೆಯವರಿರಬೇಕು.  ಇತ್ತೀಚಿನ  ವರ್ಷದಲ್ಲಿ ಅವರಿಗೆ ಭಾರತ 
>ಸರ್ಕಾರದ ‘ಪದ್ಮಶ್ರೀ’ ಗೌರವ ಕೂಡಾ ಸಂದಾಯವಾಯಿತು.  ಪ್ರಶಸ್ತಿ ಸ್ವೀಕರಿಸಲು ಕೂಡಾ ಅವರು 
>ಹೋಗಿರಲಿಲ್ಲ.  ಅವರ ಮನೆ ಬಾಗಿಲಿಗೇ ಅದು ಅರಸಿಕೊಂಡು ಬಂತು.  ಕಳೆದ ವರ್ಷ ದೇಶದಲ್ಲಿ  
>ಅಸಹಿಷ್ಣುತೆ  ಹೆಚ್ಚುತ್ತಿದೆ  ಎಂದು  ಕೇಂದ್ರಸರ್ಕಾರದ  ವಿರುದ್ಧವಾಗಿ  ಹಲವಾರು  ಸಾಹಿತಿಗಳು 
>ಪ್ರಶಸ್ತಿ  ವಾಪಸ್  ಮಾಡುತ್ತಿದ್ದ  ಅಭಿಯಾನದಲ್ಲಿ ಮಹಾದೇವರೂ ತಮಗೆ  ಸಂದಿದ್ದ  ಕೇಂದ್ರ  
>ಸಾಹಿತ್ಯ  ಅಕಾಡೆಮಿ  ಗೌರವ  ಮತ್ತ  ಪದ್ಮಶ್ರೀ  ಗೌರವಗಳನ್ನು  ಸರ್ಕಾರಕ್ಕೆ  
>ಹಿಂದಿರುಗಿಸಿದರು.     
>
>
>ಈ ರೀತಿಯ ಸಾಂಸ್ಥಿಕ ಪ್ರಶಸ್ತಿಗಳೇ ಅಲ್ಲದೆ ದೇವನೂರ ಮಹಾದೇವ ಅವರು ಪಡೆದಿರುವ ವಿಮರ್ಶಾ-ಪ್ರೀತಿ 
>ಗೌರವ ಕೂಡಾ ತುಂಬಾ ಅಪೂರ್ವವಾದದ್ದು.  ಪುತಿನ, ಜಿ.ಎಚ್.ನಾಯಕ, ಯು.ಆರ್.ಅನಂತಮೂರ್ತಿ, ಯಶವಂತ 
>ಚಿತ್ತಾಲ, ಪಿ. ಲಂಕೇಶ್ ಅಂತಹ ಹಿರಿಯರು ಕೂಡಾ ಈ ವಿಮರ್ಶಾ ಚರ್ಚೆಯಲ್ಲಿ ಭಾಗವಹಿಸಿದ್ದಾರೆಂಬುದು 
>ಮುಖ್ಯ.  ಒಡಲಾಳ, ಕುಸುಮಬಾಲೆ, ಅಮಾಸ – ಈ ಕೃತಿಗಳೆಲ್ಲಾ ನಾಟಕಗಳಾಗಿ ರೂಪಾಂತರಗೊಂಡು 
>ರಂಗಭೂಮಿಯಲ್ಲಿ ಯಶಸ್ವಿಯಾಗಿವೆ.
>
>
>ಹಿಂಸೆ, ದಬ್ಬಾಳಿಕೆ ಕ್ರೌರ್ಯ – ಇವೆಲ್ಲವೂ ನಮ್ಮ ಸಮಾಜದಲ್ಲಿ ಎಷ್ಟರ ಮಟ್ಟಿಗೆ ಹಾಸು 
>ಹೊಕ್ಕಾಗಿವೆಯೆಂದರೆ,ಈ ವಿದ್ಯಮಾನಗಳೆಲ್ಲಾ ನಮಗೆ ಸಹಜವಾಗಿ, ಸರಿಯಾಗಿಯೇ ಕಾಣುತ್ತವೆ.  ಇಂತಹ 
>ಸಮಾಜದಲ್ಲಿ ಲೇಖಕನಾಗುವವನಿಗೆ ಪ್ರತಿಭಟನೆಯ ಬಂಡಾಯದ ಅನಿವಾರ್ಯತೆ ಮತ್ತು ಸಂದಿಗ್ಧತೆ 
>ತಿಳಿದಿರಬೇಕು.  ಇಲ್ಲಿ ಮನುಷ್ಯನಲ್ಲಿ ಪ್ರೀತಿಸುವ ಮತ್ತು ತಿಳಿಯುವ ಶಕ್ತಿಯು ಎಷ್ಟೊಂದು 
>ಮುಕ್ಕಾಗಿ ಹೋಗಿದೆ ಎಂಬುದನ್ನು ಹೇಳುತ್ತಲೇ, ಈ ಜನವೇ ಪೂರ್ಣವಾಗಿ ಮನುಷ್ಯರಾಗಿ ಅನಾವರಣಗೊಂಡಾಗ, 
>ಎಷ್ಟೊಂದು ಪ್ರೀತಿಸಬಲ್ಲರು, ಎಷ್ಟೊಂದು ಗಾಢವಾಗಿ ತಿಳುವಳಿಕೆ ಪಡೆಯಬಲ್ಲರು ಎಂಬುದನ್ನು 
>ಸೂಚಿಸುವ, ಕನವರಿಸುವ ಶಕ್ತಿಯೂ ಇರಬೇಕು.  ಮಹಾದೇವರ ಬರವಣಿಗೆ ಪ್ರಾರಂಭಿಕ ಹಂತದಿಂದಲೂ ಈ ಎಲ್ಲ 
>ಗುಣ ಸ್ವಭಾವಗಳನ್ನು ಬೇರೆ ಬೇರೆ ಸ್ತರದಲ್ಲಿ ಪ್ರಕಟಿಸುತ್ತಾ, ವಿಕಾಸಗೊಂಡಿದೆ ಎಂಬುದೇ ಅವರ 
>ಸಾಹಿತ್ಯದ ವೈಶಿಷ್ಟ್ಯ ಮತ್ತು ಮಹತ್ವ.  ಈ ಕಾರಣಕ್ಕಾಗಿಯೇ ಮಹಾದೇವ ದಲಿತರ ಬದುಕಿನ ಬಗ್ಗೆ 
>ಬರೆಯುತ್ತಲೇ ಒಟ್ಟು ಸಮಾಜವನ್ನು, ಒಟ್ಟು ಚರಿತ್ರೆಯನ್ನು ಗ್ರಹಿಸಲು ಅಭಿವ್ಯಕ್ತಿಸಲು 
>ಪ್ರಯತ್ನಿಸುತ್ತಾರೆ.  ದಲಿತರು ನಮ್ಮಗಳ ಮನಸ್ಸನ್ನು ಪರಿಭಾವಿಸುವಷ್ಟು ಪ್ರತ್ಯೇಕರಲ್ಲ ಎಂದು 
>ಸೂಚಿಸುವ ಕ್ರಮ ಕೂಡಾ ಇದಾಗಿರಬಹುದು.
>
>
>ಈ ರೀತಿಯ ಗ್ರಹಿಕೆಯ ಸೂಚನೆಗಳೆಲ್ಲಾ ಅವರ ಮೊದಲ ಕಥಾ ಸಂಕಲನದಲ್ಲೇ ಇದೆ.  ಗ್ರಸ್ತ, 
>ಮಾರಿಕೊಂಡವರು ಇಂಥ ಪುಟ್ಟ ಕತೆಗಳಲ್ಲಿನ ಕಥಾ ವಿನ್ಯಾಸವೇ ದೊಡ್ದದಾಗಿದೆ.  ಅವುಗಳು ಒಳಗೊಳ್ಳುವ 
>ಪ್ರಪಂಚದ ವಿಸ್ತಾರ ಮತ್ತು ಸಂಕೀರ್ಣತೆ ಸಾಂಪ್ರದಾಯಕ ಸಣ್ಣಕತೆಯ ಅಳವಿಗೆ ಮೀರಿದ್ದು.  ಗ್ರಸ್ತ 
>ಕತೆಯಲ್ಲಿ ನಿರೂಪಕ, ಆತನ ತಾಯಿ, ಆತನನ್ನು ಓದಿಸಿ ಬೆಳೆಸಿದ ಊರ ಗೌಡ-ಎಲ್ಲರೂ ಬರವಣಿಗೆಯಲ್ಲಿ 
>ಸಿಕ್ಕಿಹಾಕಿಕೊಂಡವರೆ, ಅಪೂರ್ಣರೇ, ಅವರೊಳಗೆ ಪ್ರೀತಿಸುವ ಮತ್ತು ಅಷ್ಟೇ ಮುಖ್ಯವಾಗಿ ಸತ್ಯ 
>ಹೇಳುವ ಶಕ್ತಿಯೂ ಇದೆ. ಹೀಗಾಗಿ ದಲಿತನೊಬ್ಬನು ತನ್ನ ಸದ್ಯದ ಅವಸ್ಥೆಯನ್ನು ಮೀರಲು 
>ಪ್ರಯತ್ನಿಸುತ್ತಲೇ, ತನ್ನ ಪ್ರತಿಭಟನೆ ಮತ್ತು ಪ್ರೀತಿಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಪ್ರಯತ್ನದ 
>ಕತೆಯೂ ಆಗಿದೆ.  ಡಾಂಬರು ಬಂದುದು, ಮೂಡಲ ಸೀಮೆಯ ಕೊಲೆಗಿಲೆ ಮುಂತಾಗಿ ಮಾರಿಕೊಂಡವರು ಕತೆಗಳ 
>ಪಾತ್ರ ಮತ್ತು ಕಥಾವಿನ್ಯಾಸವೂ ಇದೆ ರೀತಿಯದು.  
>
>
>‘ಒಡಲಾಳ’ ಕಥಾನಕವನ್ನು ಕನ್ನಡ ಸಾಹಿತ್ಯ ಲೋಕ ಕ್ಲಾಸಿಕ್ ಎಂದು ಗುರುತಿಸಿಬಿಟ್ಟಿದೆ.  ಸಾಕವ್ವನ 
>ಪರಿವಾರದ ಸದಸ್ಯರೆಲ್ಲಾ ಒಟ್ಟಿಗೆ ಕುಳಿತು  ಕಡಲೇಕಾಯಿ ತಿನ್ನುವುದು, ಪುಟ್ಟಗೌರಿ ನವಿಲು 
>ಬಿಡಿಸುವುದು, ಇಂತಹ ಪ್ರಕರಣಗಳು ಕನ್ನಡ ಓದುಗರ ಸಂವೇದನೆಯಲ್ಲಿ ಶಾಶ್ವತ ಸ್ಥಾನ ಪಡೆದಿವೆ.  
>ನೂರಾರು ಪ್ರತಿಭಟನಾ ಬಂಡಾಯದ ಕತೆಗಳನ್ನು ಬರೆದರೂ, ಒಡಲಾಳದಂತಹ ಶುದ್ಧಮಾನವ ಪ್ರೀತಿಯ ಕತೆಯ 
>ಪ್ರಭಾವ ಮುಕ್ಕಾಗಲಾರದು.  ಒಡಲಾಳವು ದಲಿತರ, ಬಂಡಾಯದ, ಪ್ರತಿಭಟನೆಯ ಒಡಲಾಳದ ಕತೆಯೆಂದು 
>ತಿಳಿಯುವ ಮುನ್ನವೇ ಓದುಗ ಸಂವೇದನೆಯ ಸ್ತರದಲ್ಲೇ ದಲಿತರ ಸ್ಥಿತಿಯ ಬಗ್ಗೆ, ಅವರ 
>ಆಸೆ-ಆಕಾಂಕ್ಷೆಗಳ ಬಗ್ಗೆ ಇತ್ಯಾತ್ಮಕ ಧೋರಣೆಯ ಮನುಷ್ಯನಾಗಿ ಪರಿವರ್ತನೆ ಹೊಂದಿರುತ್ತಾನೆ 
>ಎಂಬುದೇ ಈ ಕೃತಿಯ ಸಾಧನೆ.  ಇಲ್ಲಿಯ ನಿರೂಪಣೆ ಕನ್ನಡ ಕಥನ ಸಾಹಿತ್ಯದ ಇಬ್ಬರು 
>ಶ್ರೇಷ್ಠಬರಹಗಾರರಾದ ಮಾಸ್ತಿ ಮತ್ತು ಕುವೆಂಪು ಅವರನ್ನು ಮತ್ತೆ ಮತ್ತೆ ನೆನೆಪಿಗೆ ತರುತ್ತದೆ.  
>ಮಹಾದೇವರ ಈ ಕೃತಿಯಲ್ಲಿ ಹಾಸ್ಯ, ತಮಾಷೆಗಳ ಮೆಲುದನಿಯಿದ್ದರೂ ಅದು ಕಥಾವಸ್ತುವಿನಲ್ಲಿ 
>ಅಡಕವಾಗಿರುವ ವಿಷಾದ ಭಾವಕ್ಕೆ ಅಡ್ಡಿ ಬರುವುದಿಲ್ಲ.  ಈ ಕೃತಿಯಲ್ಲಿ ಮಹಾದೇವ 
>ಪ್ರತಿಭಟನೆ-ಬಂಡಾಯವೆನ್ನುವುದು ಎಷ್ಟೊಂದು ಪ್ರೀತಿಯ, ಎಷ್ಟೊಂದು ಅಂತಃಕಾರಣದ 
>ಕ್ರಿಯೆಯೆಂಬುದನ್ನು ಓದುಗರಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ.
>
>
>‘ಕುಸುಮ ಬಾಲೆ’ ಒಂದು ದೃಷ್ಟಿಯಿಂದ ಕತೆಯ ಹಂಗನ್ನು ತೊರೆದ ಕಾದಂಬರಿ ಎಂದು ಹೇಳಬಹುದು.  
>ಹಾಗೆಂದರೆ ಕತೆ ಇಲ್ಲವೆಂದಲ್ಲ.  ಘಟನೆ ಇಲ್ಲವೆಂದಲ್ಲ.  ಲೇಖಕನೇ ಕತೆಯ ಸ್ವಾರಸ್ಯವನ್ನೆಲ್ಲಾ 
>ಕೇವಲ ಏಳೆಂಟು ವಾಕ್ಯಗಳಲ್ಲಿ ನಾಂದಿ ರೂಪದಲ್ಲಿ ಹೇಳಿ, ಕತೆಯನ್ನು ಮೀರಿದ್ದಕ್ಕೆ ಓದುಗನನ್ನು 
>ಸಿದ್ಧಗೊಳಿಸುವಂತಿದೆ.  ಅಕ್ಕಮಹಾದೇವಿ, ಆಕೆಗೆ ಜೀತದಾಳಿನಿಂದ ಹುಟ್ಟಿದ ಮಗ ಯಾಡ, ನಂತರ ಅವನು 
>ಬೆಳೆದು ಯಾಡೇಗೌಡನಾಗುವುದು, ಅವನ ಮಗ ಸೋಮಪ್ಪ ಊರಿಗೆ ದೊಡ್ಡವನು, ಅವನ ಮಗಳು ಕುಸುಮ, ಅವಳಿಗೆ 
>ಚನ್ನನ ಮೂಲಕ ಮಗು, ಚೆನ್ನನ ಕೊಲೆ, ಅದನ್ನು ಅರಿಯದವರು ಅವನಿಗಾಗಿ ಕಾಯುವ ಪರಿ ಇಷ್ಟು ಕತೆಯ 
>ಹಂದರ.  ಈ ಹಂದರ ಪಡೆಯಬಹುದಾದ ಕಾಲಾಂತರದ  ದೇಶಾಂತರದ ಸ್ವರೂಪವೇ ಕೃತಿಯ ಜೀವಾಳ.  ಈ ಜೀವಾಳವು 
>ಕತೆಯನ್ನು ಪ್ರವೇಶಿಸಲು ಅನೇಕ ಕಿಟಕಿಗಳನ್ನು ತೆರೆಯುತ್ತದೆ.  ಯಾವ ಕಿಟಕಿಯ ಮೂಲಕ ನೀವು ಕತೆ 
>ಹೊಕ್ಕರೂ ಕೊನೆಗೆ ಅನುಭವಿಸುವ ಜೀವಂತಿಕೆಯ ಮತ್ತು ವಿಷಾದದ ಭಾವ ಮಾತ್ರ ಬೇರೆ 
>ಬೇರೆಯಾಗುವುದಿಲ್ಲ.  ಬೇರೆ ಬೇರೆ ಸ್ತರಗಳಿಗೆ, ಬೇರೆ ಬೇರೆ ಕಾಲಕ್ಕೆ ಸೇರಿದ ಪಾತ್ರಗಳ ಮೂಲಕ 
>ತನ್ನ ಭಾಷಾ ಪ್ರಯೋಗದ ಮೂಲಕ ನಿರೂಪಣಾ ವೈವಿಧ್ಯದ ಮೂಲಕ ಓದುಗರನ್ನು ಕೆಣಕುವುದು ಈ ಕೃತಿಯ ಒಂದು 
>ಮುಖ್ಯಗುಣ.
>
>
>ಹೀಗೆ ದೇವನೂರು ಮಹಾದೇವರ ಬರವಣಿಗೆ ಎರಡು ದೃಷ್ಟಿಯಿಂದ ಮಹತ್ವದ್ದೆನಿಸುತ್ತದೆ.  ಒಂದು ಅವರ 
>ಕಂದರಿಸಿ ಶೋಧಿಸಿ ಮಂಡಿಸಿದ ದಲಿದ ಲೋಕದ ಅನುಭವ,  ಮತ್ತೊಂದು ಅವರು ಹುಡುಕಿದ ಹೊಸ ಅಭಿವ್ಯಕ್ತಿ 
>ಕ್ರಮಗಳ ಪ್ರಸ್ತುತತೆ.
>
>
>ಇತ್ತೀಚಿನ ವರ್ಷದಲ್ಲಿ  ದೇವನೂರರ ಹಲವಾರು ಚಿಂತನೆಗಳ ಮೂಸೆಯಲ್ಲಿ ಅರಳಿದ ‘ಎದೆಗೆ ಬಿದ್ದ 
>ಅಕ್ಷರ’ ಎಂಬ ಕೃತಿ ಪ್ರಕಟಗೊಂಡಿದೆ.   ಕಳೆದ ನಾಲ್ಕು ದಶಕಗಳಲ್ಲಿ ದೇವನೂರ  ಅವರು  ಬರೆದ, ಆಡಿದ 
>ಮಾತುಗಳನ್ನು ಒಟ್ಟಿಗೆ ಸೇರಿಸಿ ಓದುಗರಿಗೆ ಒಪ್ಪಿಸುವ ಒಂದು ಪ್ರಯತ್ನ ಇದಾಗಿದೆ.  ದೇವನೂರರ ಈ 
>ಬರಹದಲ್ಲಿ ಗಾಂಧಿ, ಅಂಬೇಡ್ಕರ್ ಮತ್ತು  ರಾಮಮನೋಹರ ಲೋಹಿಯಾರ ಚಿಂತನೆಗಳು ಹಾಸುಹೊಕ್ಕಾಗಿವೆ.  
>“ಭಾರತ ಗಾಯಗೊಂಡು ಬಿದ್ದಿದೆ, ಅದರ ಗಾಯ ಅದಕ್ಕೆ ಗಾಯ ಅಂತ ಅನ್ನಿಸುತ್ತಿಲ್ಲ.  ಅಸ್ಪೃಶ್ಯತೆ, 
>ಜಾತಿ, ಮತೀಯತೆಯ ಗಾಯವು ನಂಜಾಗಿ ಮಿದುಳಿಗೇರಿ ಭಾರತ ಹುಚ್ಚಾಗಿದೆ.  ಈ ಗಾಯವನ್ನೇ, ಹುಚ್ಚನ್ನೇ 
>ಸಮಾಜದೊಳಗೆ ಸಂಸ್ಕೃತಿ ಅಂತ, ಪರಂಪರೆ ಅಂತ ಬಿಂಬಿಸಲಾಗಿದೆ” ಎಂಬ ದೇವನೂರ ಮಹಾದೇವರ ಮಾತುಗಳು 
>ಅವರ ಚಿಂತನೆಗಳ ಆಳದಲ್ಲಿರುವ ವ್ಯಥೆಗಳನ್ನು, ಕಾಳಜಿಗಳನ್ನು ಸ್ಪಷ್ಟಪಡಿಸುತ್ತವೆ. 
>
>
>“ದಿನ ಸವೆಯುತ್ತಿದೆ.  ದಿನ ಮುಗಿಯುವ ಕೊನೆಯಲ್ಲಿ ಎಲ್ಲವೂ ಮುಗಿದ ಮೇಲೆ ಭಾವನೆ ಮೀರಿದ 
>ಇಥಿಯೋಪಿಯಾದ ಮಕ್ಕಳು ಬರುತ್ತವೆ.  ಕ್ಷಾಮದ ಬಿಳಿ ಹಲ್ಲುಗಳು ಅವುಗಳನ್ನು ತಿನ್ನುತ್ತವೆ.  
>ಅವುಗಳು ನನ್ನನ್ನು ತಿನ್ನುತ್ತವೆ” ಎಂಬ ದೇವನೂರರ ಮಾತುಗಳು ಅವರಿಗೆ ಪ್ರಪಂಚದ ಕುರಿತಾಗಿ ಇರುವ 
>ಪ್ರೀತಿಯ ಬಗ್ಗೆ ನಮಗೆ ಇನ್ನಿಲ್ಲದಂತಹ ಗಾಢತೆಯನ್ನು ತಲುಪಿಸುತ್ತದೆ. 
>
>
>ತಮ್ಮ ಬರವಣಿಗೆ, ಸಾಮಾಜಿಕ ಚಿಂತನೆ, ಮುಕ್ತ ಅಭಿಪ್ರಾಯ ಮಂಡನೆ, ಜನಸ್ಪಂದನೆಗಳ ಮೂಲಕ ನಮ್ಮ 
>ನಡುವಿನ ಅಪೂರ್ವ ವ್ಯಕ್ತಿತ್ವದ ದೇವನೂರ ಅವರನ್ನು ನೆನೆದು ಮನ ಕೃತಜ್ಞತೆಗಳೊಡನೆ 
>ಹರ್ಷಿತವಾಗುತ್ತದೆ.
>
>
>ಸಮೀರ ( ಕನ್ನಡ ಭಾಷಾ ಶಿಕ್ಷಕಿ 
>
>-- 
>-----------
>1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
>http://karnatakaeducation.org.in/KOER/en/index.php/Portal:ICT_Literacy
>4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
>-http://karnatakaeducation.org.in/KOER/en/index.php/Public_Software
>-----------
>--- 
>You received this message because you are subscribed to the Google Groups 
>"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>To unsubscribe from this group and stop receiving emails from it, send an 
>email to [email protected].
>To post to this group, send email to [email protected].
>For more options, visit https://groups.google.com/d/optout.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to